ಆಹಾರ ವಿತರಣೆಯದೂ ಒಂದು ದೊಡ್ಡ ಸಮಸ್ಯೆ. ದೇಶದಲ್ಲಿ ಸಾಕಷ್ಟು ಕೈಗಾವಲು ದಾಸ್ತಾನು ಇಲ್ಲದ್ದರಿಂದ ವಿತರಣೆ ವ್ಯವಸ್ಥೆಯಲ್ಲಿ ಆಗಿಂದಾಗ್ಗೆ ವಿಷಮ ಪರಿಸ್ಥಿತಿ ಏರ್ಪಡುತ್ತದೆ. 1957ರಲ್ಲಿ ಅಶೋಕ ಮೆಹ್ತರ ಅಧ್ಯಕ್ಷತೆಯಲ್ಲಿ ನೇಮಕವಾಗಿದ್ದ ವಿಚಾರಣಾ ಸಮಿತಿ ಈ ಸಮಸ್ಯೆಯನ್ನು ಕೂಲಂಕಷವಾಗಿ ವಿವೇಚಿಸಿದೆ. ಸಾಕಷ್ಟು ಆಹಾರ ದಾಸ್ತಾನು ಮಾಡಿ ಬೆಲೆಗಳಲ್ಲಿ ಸ್ತಿಮಿತವನ್ನೇರ್ಪಡಿಸಲು ಇದು ನಾನಾ ಸಲಹೆಗಳನ್ನು ಮಾಡಿದೆ. ಈ ಶಿಫಾರಸುಗಳು ಸರ್ಕಾರದ ಒಪ್ಪಿಗೆ ಪಡೆದಿವೆ. ಕೈಗಾವಲು ದಾಸ್ತಾನು ಹೊಂದುವ ಉದ್ದೇಶದಿಂದಲೂ ವಿತರಣೆಯಲ್ಲಿ ಸುವ್ಯವಸ್ಥೆಯನ್ನೇರ್ಪಡಿಸಲೂ ಭಾರತದ ಆಹಾರ ಕಾರ್ಪೊರೇಷನ್ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯ) ಎಂಬ ಸಂಸ್ಥೆ 1965ರಲ್ಲಿ ಸರ್ಕಾರಿ ವಲಯದಲ್ಲಿ ಸ್ಥಾಪಿತವಾಯಿತು. 100 ಕೋಟಿ ರೂಪಾಯಿಗಳ ಅಧಿಕೃತ ಬಂಡವಾಳದೊಡನೆ ಸ್ಥಾಪಿತವಾದ ಈ ಸಂಸ್ಥೆಯ ನಿರ್ವಹಣ ಬಂಡವಾಳ 31 ಮಾರ್ಚ್ 1968ರಂದು 39 ಕೋಟಿ ರೂಪಾಯಿಗಳು. ಆಹಾರ ಸಂಗ್ರಹಣೆ, ಸಾರಿಗೆ, ದಾಸ್ತಾನು, ರೇವುಗಳಿಂದ ಒಳನಾಡಿಗೆ ಧಾನ್ಯದ ಸಾಗಾಣಿಕೆ-ಇವೆಲ್ಲವೂ ಆಹಾರ ಕಾರ್ಪೊರೇಷನ್ನಿನ ಹೊಣೆ. ರೈತರ ಹಿತರಕ್ಷಣೆಗಾಗಿ ಬೆಳೆಗಳಿಗೆ ಬೆಂಬಲ ಬೆಲೆ ನೀಡುವುದು, ಆಹಾರಧಾನ್ಯಗಳನ್ನು ರಾಷ್ಟ್ರಾದ್ಯಂತ ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ವಿತರಿಸುವುದು, ಆಹಾರಧಾನ್ಯಗಳನ್ನು ಸಂಗ್ರಹಿಸಿ, ಕಷ್ಟ ಕಾಲಕ್ಕೆ ಒದಗಲೆಂದು ಸುರಕ್ಷಿತವಾಗಿಡುವುದು, ವಿಶೇಷವಾಗಿ ಬಡತನ ರೇಖೆಯಿಂದ ಕೆಳಗಿರುವವರಿಗೆ ಆಹಾರಧಾನ್ಯ ಗಳನ್ನು ನ್ಯಾಯಬೆಲೆಯಲ್ಲಿ ನೀಡುವುದು. ಬೆಲೆ ಸ್ಥಿರತೆ ಕಾಪಾಡಲು ಮಧ್ಯ ಪ್ರವೇಶಿಸುವುದು-ಆಹಾರ ಕಾರ್ಪೊರೇಷನ್ನಿನ ಧ್ಯೇಯ. ಆಹಾರಧಾನ್ಯದ ಸಗಟು ವ್ಯಾಪಾರದಲ್ಲೂ ವಿತರಣೆಯಲ್ಲೂ ಇದು ತಕ್ಕಮಟ್ಟಿನ ಹತೋಟಿ ಹೊಂದಿ ಸಹಕಾರ ಸಂಘಗಳು ಹಾಗೂ ಚಿಲ್ಲರೆ ವರ್ತಕರ ನೆರವುಗಳಿಂದ ವಿತರಣೆಯನ್ನು ಸುವ್ಯವಸ್ಥೆಗೆ ಒಳಪಡಿಸಬಹುದು. ಆಹಾರಧಾನ್ಯದ ಕೈಗಾವಲು ದಾಸ್ತಾನನ್ನು ಸಾಧ್ಯಗೊಳಿಸಿ ಬೆಲೆಗಳಲ್ಲಿ ಸ್ಥಿರತೆ ಏರ್ಪಡಿಸಬಹುದು. 
ಕೋಲ್ಕತದಲ್ಲೂ ಚೆನ್ನೈನಲ್ಲೂ ದೇಶದ ಐದು ಕಡೆಗಳಲ್ಲಿ (ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ಭಾಗಗಳಲ್ಲಿ) ಇಪ್ಪತ್ನಾಲ್ಕು ವಲಯ ಕಾರ್ಯಾಲಯಗಳಿವೆ.
ಆಹಾರ ಕಾರ್ಪೊರೇಷನ್ನು ಸು. 250 ಲಕ್ಷ ಟನ್ನುಗಳಷ್ಟು ಆಹಾರಧಾನ್ಯಗಳನ್ನು ಸು. ಸರಾಸರಿ 1500 ಕಿಮೀ. ದೂರ ಸಾಗಿಸುತ್ತದೆ. ಆಹಾರಧಾನ್ಯ ಹೆಚ್ಚುವರಿ ಇರುವಂಥ ರಾಜ್ಯಗಳಿಂದ ಕೊರತೆಯಿರುವ ರಾಜ್ಯಗಳಿಗೆ ಸು. 12 ಲಕ್ಷ (50 ಕೆಜಿ) ಚೀಲಗಳನ್ನು ಪ್ರತಿನಿತ್ಯ ಅದು ಸಾಗಿಸುತ್ತದೆ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ